ಟ್ಯಾಕ್ಸಸ್ -
ಕೋನಿಫರೇಲೀಸ್ ಗಣದ ಟ್ಯಾಕ್ಸೇಸೀ ಕುಟುಂಬಕ್ಕೆ ಸೇರಿದ ಒಂದು ನಗ್ನಬೀಜ ಸಸ್ಯ. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದನ್ನು ಯೂ ಎಂದು ಕರೆಯಲಾಗುತ್ತದೆ. ದಟ್ಟಹಸಿರುಬಣ್ಣದ ಎಲೆಗಳಿಂದಲೂ ಬೆರಿಯಂಥ ಕೆಂಪು ಬಣ್ಣದ ಹಣ್ಣುಗಳಿಂದಲೂ ತುಂಬ ಸುಂದರವಾಗಿ ಕಾಣುವುದರಿಂದ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಲಾಗುತ್ತದೆ. ಇದರಲ್ಲಿ 6 ಪ್ರಭೇದಗಳುಂಟು. ಇವುಗಳ ವ್ಯಾಪ್ತಿ ಪ್ರಪಂಚದ ಉತ್ತರಾರ್ಧಗೋಳದಲ್ಲಿ ಹೆಚ್ಚು. ಭಾರತದಲ್ಲಿ ಟ್ಯಾಕ್ಸಸ್ ಬಕಾಟ ಎಂಬ ಪ್ರಭೇದ ಹಿಮಾಲಯದಲ್ಲಿ 6000'-11,000' ಎತ್ತರದ ಪ್ರದೇಶಗಳಲ್ಲಿ ಬೆಳೆಯುವುದುಂಟು. ಉತ್ತರಭಾರತದಲ್ಲಿ ಇದಕ್ಕೆ ತಾಲೀಸಪತ್ರೆ ಎಂಬ ಹೆಸರುಂಟು.

	ಟ್ಯಾಕ್ಸಸಿನ ಪ್ರಭೇದಗಳು ನಿತ್ಯಹರಿದ್ವರ್ಣದ ಮರಗಳು ಇಲ್ಲವೆ ಪೊದೆಗಳು. ಎಲೆಗಳು ರೇಖಿಯವಾಗಿವೆ; ಎರಡು ಸಾಲುಗಳಲ್ಲಿ ಜೋಡಣೆಗೊಂಡಿವೆ. ಹೂಗಳು ಏಕಲಿಂಗಿಗಳು; ಎಲೆಗಳ ಕಂಕುಗಳಲ್ಲಿ ಒಂಟೊಂಟಿಯಾಗಿ ಅರಳುವುವು. ಗಂಡು ಹೂಗಳು ಗುಂಡನೆಯ ಆಕಾರದವು. ಒಂದೊಂದರಲ್ಲೂ 4-8 ಕೇಸರಗಳಿವೆ. ಹೆಣ್ಣುಹೂವಿನಲ್ಲಿ ಒಂದೇ ಅಂಡಕ ಉಂಟು. ಇದರ ಬುಡದಲ್ಲಿ ಹಲವಾರು ವೃಂತಪತ್ರಗಳಿವೆ. ಬೀಜ ಗಟ್ಟಿಯಾದ ನಟ್. ಇದರ ಸುತ್ತ ಮಾಂಸಲವಾದ ಬಟ್ಟಲಿನಂಥ ಕೆಂಪುಬಣ್ಣದ ತಟ್ಟೆಯುಂಟು.

	ಟ್ಯಾಕ್ಸಸಿನ ಚೌಬೀನೆ ಉತ್ತಮ ದರ್ಜೆಯದು. ಇದನ್ನು ಅಲಮಾರು, ಕ್ಯಾಬಿನೆಟ್ ಪೆಟ್ಟಿಗೆ ಹಾಗೂ ಬಿಲ್ಲಿನ ತಯಾರಿಕೆಗೆ ಬಳಸಲಾಗುತ್ತದೆ. ತಾಲೀಸಪತ್ರೆ ಶಾಮಕ ಮತ್ತು ಅಂಗಗ್ರಹನಾಶಕ. ಉನ್ಮಾದ (ಹಿಸ್ಟೀರಿಯ), ಅಪಸ್ಮಾರ ಮುಂತಾದ ಮನೋರೋಗಗಳಿಗೆ ಇದು ಒಳ್ಳೆಯ ಔಷಧಿ, ಇದರ ಎಲೆಗಳ ಕಷಾಯವನ್ನು ಬಿಕ್ಕಲು, ಅಸ್ತಮ, ಶ್ವಾಸರೋಗ, ಅಪಸ್ಮಾರ ಚಿಕೆತ್ಸೆಯಲ್ಲಿ ಬಳಸುವರು. ಇಲ್ಲಿನ ಸಕ್ರಿಯ ತತ್ತ್ವ ಟ್ಯಾಕ್ಸಿನ್ ಎಂಬ ಸಸ್ಯಕ್ಷಾರ; ಕೆಲವೊಮ್ಮೆ ಇದು ಹೃದ್ರೋಗಶಮನಾಕಾರಿ ಎಂದೂ ಕಂಡುಬಂದಿದೆ. ಇದು ದೊರೆಯುವುದು ಎಲೆ, ಟೊಂಗೆ, ತೊಗಟೆ  ಮತ್ತು ಬೀಜಗಳಲ್ಲಿ. ಟ್ಯಾಕ್ಸಸಿನ  ಎಲೆ ಕುದುರೆಗಳಿಗೆ, ದನಗಳಿಗೆ ಅಪಾಯಕಾರಿ ಎಂದು ಹೇಳಲಾಗಿದೆ. ಟ್ಯಾಕ್ಸಸಿನ ಪ್ರಭೇದಗಳಲ್ಲಿ ಮುಖ್ಯವಾದವು ಬಕಾಟ, ಕಸ್ಪಿಡೇಟ, ಕೆನಡೆನ್ಸಿಸ್ ಮತ್ತು ಬ್ರೆವಿಪೋಲಿಯಗಳು.
(ಕೆ.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ